ನವದೆಹಲಿ: ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಪ್ರಮಾಣದ ಹಾನಿ ಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ತಮ್ಮ ಮುಂಬರುವ ಆತ್ಮಕಥನದ ಬಿಡುಗಡೆ ಹಿನ್ನೆಲೆಯಲ್ಲಿ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸರ್ಕಾರದ ಆಡಳಿತ, ಕಾಂಗ್ರೆಸ್ ಪಕ್ಷದ ರಾಜಕೀಯ ಭವಿಷ್ಯ ಹಾಗೂ ವಿರೋಧ ಪಕ್ಷಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳನ್ನು ಮತ್ತೆ ಬಲಪಡಿಸಲು ಸಮಯ ಬೇಕು
ಕಳೆದ 12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಸಾಕಷ್ಟು ಹಾನಿಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಪ್ರಸ್ತುತ ಸರ್ಕಾರ ಅಧಿಕಾರದಿಂದ ಹೊರಬಂದ ಬಳಿಕವೂ ದೇಶದ ವ್ಯವಸ್ಥೆಗಳನ್ನು ಮತ್ತೆ ಆರೋಗ್ಯಕರ ಸ್ಥಿತಿಗೆ ತರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರಯತ್ನಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರೋಧ ಪಕ್ಷಗಳಿಗೆ ಸಮಾನ ಅವಕಾಶ ಸಿಗುತ್ತಿಲ್ಲ
ಕಾಂಗ್ರೆಸ್ ಪಕ್ಷದ ರಾಜಕೀಯ ಕುಸಿತ ಮತ್ತು ಭವಿಷ್ಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಸಮಾನ ರಾಜಕೀಯ ಅವಕಾಶಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಸೇರಿದಂತೆ ವಿವಿಧ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಡಳಿತಾರೂಢ ಪಕ್ಷದ ಪ್ರಭಾವವಿದೆ ಎಂದು ದೂರಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳ ಮೇಲಿನ ನಿಯಂತ್ರಣ, ಆರ್ಥಿಕ ಬಲ ಮತ್ತು ಧರ್ಮದ ರಾಜಕೀಯ ಬಳಕೆಯೂ ವಿರೋಧ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿವೆ ಎಂದು ಹೇಳಿದ್ದಾರೆ.
ಇಷ್ಟೆಲ್ಲ ಸವಾಲುಗಳ ನಡುವೆಯೂ ಕಾಂಗ್ರೆಸ್ ಹೋರಾಟ ಮುಂದುವರಿಸಿದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವಿವಿಧ ರೀತಿಯ ಕಿರುಕುಳಗಳನ್ನು ಎದುರಿಸುತ್ತಿದ್ದಾರೆ. ಆದರೂ ದೇಶದ ಪ್ರತಿಯೊಂದು ಗ್ರಾಮ ಮತ್ತು ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂವಿಧಾನದ ಮೌಲ್ಯಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಚುನಾವಣೆಗಳಲ್ಲಿ ಅಕ್ರಮ ನಡೆದಿರುವ ಆರೋಪ
ಇತ್ತೀಚಿನ ತಿಂಗಳುಗಳಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಎಂಬುದು ಸಾಬೀತಾಗಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಈ ವಿಚಾರದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಪಕ್ಷದ ರಾಜಕೀಯ ಭವಿಷ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಆರ್ಎಸ್ಎಸ್ನಿಂದ ಕಲಿಯಬೇಕಾದದ್ದೇನೂ ಇಲ್ಲ
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಏನನ್ನು ಕಲಿಯಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, ಮೋದಿ ಅವರ ಸೈದ್ಧಾಂತಿಕ ಹಿನ್ನೆಲೆ ಕಾಂಗ್ರೆಸ್ನಿಂದ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿಯೂ ಯಶಸ್ವಿ ರಾಜಕೀಯ ನಾಯಕರ ಉದಾಹರಣೆಗಳಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಪಕ್ಷದಲ್ಲೇ ರಾಜಕೀಯವಾಗಿ ಬೆಳೆದಿದ್ದಾರೆ. ಹೀಗಾಗಿ ಬಿಜೆಪಿ ಅಥವಾ ಆರ್ಎಸ್ಎಸ್ನಿಂದ ಕಾಂಗ್ರೆಸ್ ಕಲಿಯಬೇಕಾದದ್ದು ಹೆಚ್ಚೇನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
2004ರಲ್ಲಿ ಪ್ರಧಾನಿಯಾಗುವ ಬಗ್ಗೆ ಏನಂದ್ರು?
2004ರಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ತಾವೇ ಪ್ರಧಾನಿಯಾಗಿದ್ದರೆ ಸರ್ಕಾರದ ನೀತಿಗಳು ಹೇಗೆ ಬದಲಾಗುತ್ತಿದ್ದವು ಎಂಬ ಪ್ರಶ್ನೆಗೂ ಸೋನಿಯಾ ಗಾಂಧಿ ಉತ್ತರಿಸಿದ್ದಾರೆ. ಅಂತಹ ಆಲೋಚನೆ ತಮ್ಮ ಮನಸ್ಸಿಗೆ ಬಂದಿರಲಿಲ್ಲ ಎಂದು ಹೇಳಿದ್ದಾರೆ.
ಅಂದಿನ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಆಡಳಿತದ ನೇತೃತ್ವ ವಹಿಸಿದ್ದರು. ತಾವು ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿದ್ದಾಗಿ ಅವರು ತಿಳಿಸಿದ್ದಾರೆ.
ನವೆಂಬರ್ 10ರಂದು ಸೋನಿಯಾ ಗಾಂಧಿ ಆತ್ಮಕಥನ ಬಿಡುಗಡೆ
ಸೋನಿಯಾ ಗಾಂಧಿ ಅವರ 544 ಪುಟಗಳ ಆತ್ಮಕಥನ Belonging: A Journey of Love ನವೆಂಬರ್ 10ರಂದು ಹಾರ್ಪರ್ಕಾಲಿನ್ಸ್ ಪ್ರಕಾಶನದ ಮೂಲಕ ಬಿಡುಗಡೆಯಾಗಲಿದೆ.
ಈ ಪುಸ್ತಕದಲ್ಲಿ ಅವರ ಬಾಲ್ಯದ ದಿನಗಳು, ರಾಜೀವ್ ಗಾಂಧಿ ಅವರೊಂದಿಗಿನ ಪರಿಚಯ ಮತ್ತು ವಿವಾಹ, ಗಾಂಧಿ ಕುಟುಂಬದ ದುರಂತ ಘಟನೆಗಳು ಹಾಗೂ ಭಾರತದ ರಾಜಕೀಯ ಜೀವನದಲ್ಲಿ ಅವರು ಕಂಡ ಅನುಭವಗಳ ಕುರಿತು ವಿವರಿಸಲಾಗಿದೆ.