ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ಅವರ ಬಿಗ್ಬಾಸ್ ಪಯಣಕ್ಕೆ ಬೆನ್ನೆಲುಬಾಗಿ ನಿಂತಿದ್ದ ಉದ್ಯಮಿ ಹಾಗೂ ‘ರಿಷಿ ಡಿಸೈನ್’ ಸಂಸ್ಥೆಯ ಮಾಲಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ಹಠಾತ್ತನೆ ನಿಧನರಾಗಿದ್ದಾರೆ. ಭಾನುವಾರ ಅವರು ಮೃತಪಟ್ಟಿದ್ದು, ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.
ಸ್ಯಾಂಡಲ್ವುಡ್ ತಾರೆಯರ ನೆಚ್ಚಿನ ವಸ್ತ್ರ ವಿನ್ಯಾಸಕಿಯಾಗಿದ್ದ ಪಲ್ಲವಿ ಲಕ್ಷ್ಮಿಕಾಂತ್ ಅವರು ಫ್ಯಾಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ‘ರಿಷಿ ಡಿಸೈನ್’ ಸಂಸ್ಥೆಯ ಮೂಲಕ ಹಲವು ನಟ-ನಟಿಯರು ಹಾಗೂ ಗಣ್ಯರಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದರು.
ಮಲ್ಲಮ್ಮನ ಬಿಗ್ಬಾಸ್ ಪಯಣದಲ್ಲಿ ಪಲ್ಲವಿ ಪಾತ್ರ
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಅವರಿಗೆ ಪಲ್ಲವಿ ಅವರು ಉಳಿದುಕೊಳ್ಳಲು ಜಾಗ ಕಲ್ಪಿಸಿದ್ದರು. ತಮ್ಮ ಬೊಟಿಕ್ನಲ್ಲೇ ಕೆಲಸವನ್ನೂ ನೀಡಿದ್ದರು. ಮಲ್ಲಮ್ಮ ಅವರನ್ನು ಕೇವಲ ಉದ್ಯೋಗಿಯಂತೆ ನೋಡದೆ, ಮನೆಯ ಸದಸ್ಯೆಯಂತೆ ಪ್ರೀತಿಯಿಂದ ನೋಡಿಕೊಂಡಿದ್ದರು ಎನ್ನಲಾಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಲ್ಲಮ್ಮ, ತಮ್ಮ ಮುಗ್ಧ ನಡವಳಿಕೆ ಹಾಗೂ ಮನರಂಜನೆಯ ಆಟದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಮಲ್ಲಮ್ಮ ಬಿಗ್ಬಾಸ್ ವೇದಿಕೆ ತಲುಪುವಲ್ಲಿ ಪಲ್ಲವಿ ಅವರ ಬೆಂಬಲವೂ ಪ್ರಮುಖವಾಗಿತ್ತು ಎಂದು ಹೇಳಲಾಗಿದೆ.
ಕಿರುತೆರೆ ನಟ ಮನೋಜ್ ಕುಮಾರ್ ಅವರ ಜೊತೆಗೆ ಪಲ್ಲವಿ ಅವರೂ ಮಲ್ಲಮ್ಮಗೆ ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್ಬಾಸ್ ಮನೆಗೆ ಪ್ರವೇಶಿಸುವ ಸಂದರ್ಭದಲ್ಲೂ ಹಾಗೂ ಮನೆಯಿಂದ ಹೊರಬಂದ ಸಂದರ್ಭದಲ್ಲೂ ಕಿಚ್ಚ ಸುದೀಪ್ ಅವರು ಪಲ್ಲವಿ ಅವರ ಬೆಂಬಲವನ್ನು ಮೆಚ್ಚಿಕೊಂಡಿದ್ದರು ಎನ್ನಲಾಗಿದೆ.
ಪಲ್ಲವಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ ಮಲ್ಲಮ್ಮ
ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ನೀಡಿದ ಸಂದರ್ಶನಗಳಲ್ಲೂ ಮಲ್ಲಮ್ಮ ಅವರು ಪಲ್ಲವಿ ‘ಮೇಡಂ’ ಬಗ್ಗೆ ಗೌರವ ಮತ್ತು ಕೃತಜ್ಞತೆಯಿಂದ ಮಾತನಾಡುತ್ತಿದ್ದರು. ಇದೀಗ ಪಲ್ಲವಿ ಅವರ ನಿಧನದ ಸುದ್ದಿ ಮಲ್ಲಮ್ಮ ಅವರಿಗೆ ಆಘಾತ ತಂದಿದೆ ಎನ್ನಲಾಗಿದೆ.
ಪಲ್ಲವಿ ಲಕ್ಷ್ಮಿಕಾಂತ್ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಆಪ್ತರು ಹಾಗೂ ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.