ಚೆನ್ನೈ: ಸರ್ಕಾರಿ ಶಾಲಾ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಚಿಕನ್ ಬಿರಿಯಾನಿ ಸೇರಿಸುವ ಯೋಜನೆ ಇದಾಗಿದೆ.
ಈ ಹಿಂದೆ ಮುಖ್ಯಮಂತ್ರಿ ವಿಜಯ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ನೀಡುವ ಕುರಿತು ಘೋಷಣೆ ಮಾಡಿದ್ದರು ಎನ್ನಲಾಗಿದ್ದು, ಇದೀಗ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಸಿದ್ಧತೆ ನಡೆಯುತ್ತಿದೆ.
ಮಕ್ಕಳಿಗೆ ಹೆಚ್ಚಿನ ಪ್ರೋಟೀನ್
ಬೆಳೆಯುವ ಮಕ್ಕಳಿಗೆ ದೇಹದ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಹಾಗೂ ಪೌಷ್ಟಿಕಾಂಶ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದೆ.
ಈ ಕುರಿತು ತಮಿಳುನಾಡು ಶಿಕ್ಷಣ ಸಚಿವ ರಾಜ್ ಮೋಹನ್ ಮಾತನಾಡಿದ್ದು, ಜೈಲಿನಲ್ಲಿರುವ ಕೈದಿಗಳಿಗೂ ಚಿಕನ್ ಬಿರಿಯಾನಿ ಸಿಗುತ್ತದೆ. ಹಾಗಾದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮುಗ್ಧ ಮಕ್ಕಳಿಗೆ ಆ ಭಾಗ್ಯ ಸಿಗಬಾರದೇ? ಎಂದು ಪ್ರಶ್ನಿಸಿದ್ದಾರೆ.
ಈ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಬೆಳೆಯುತ್ತಿರುವ ಮಕ್ಕಳಿಗೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಪೌಷ್ಟಿಕಾಂಶದ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಚಿಕನ್ ತಿನ್ನದ ಮಕ್ಕಳಿಗೆ ವೆಜ್ ಆಯ್ಕೆ
ಚಿಕನ್ ಬಿರಿಯಾನಿ ಸೇವಿಸಲು ಇಷ್ಟವಿಲ್ಲದ ಅಥವಾ ಸೇವಿಸದ ಮಕ್ಕಳಿಗೆ ಸಸ್ಯಾಹಾರಿ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಶಿಕ್ಷಣದ ಅಭಿವೃದ್ಧಿಯ ಜೊತೆಗೆ ಮಕ್ಕಳ ಪೌಷ್ಟಿಕಾಂಶಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಶೈಕ್ಷಣಿಕ ಕ್ರಾಂತಿಯ ಜತೆಗೆ ಪೌಷ್ಟಿಕಾಂಶದ ಕ್ರಾಂತಿಯನ್ನೂ ಕೈಜೋಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಚಿಕನ್ ಬಿರಿಯಾನಿ ಸೇರಿಸುವ ಯೋಜನೆ ಜಾರಿಗೆ ಬಂದರೆ, ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟದ ಮೆನುವಿನಲ್ಲಿ ಇದು ಹೊಸ ಸೇರ್ಪಡೆಯಾಗಲಿದೆ.