TVK ಮೈತ್ರಿ ಕೂಟಕ್ಕೆ ಹೊಸ ಹೆಸರು; ವಿಜಯ್‌ ಹೊಸ ಆಟ ಶುರು

ಚೆನ್ನೈ: ನಟ ವಿಜಯ್‌ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ನಡೆಯುತ್ತಿದೆ. ಇದೀಗ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಸೇರಿರುವ ಮೈತ್ರಿಗೆ ಹೊಸ ಹೆಸರು ಫೈನಲ್‌ ಆಗಿದೆ.

ಈ ಮೈತ್ರಿಗೆ ‘ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿ’ (SSJVA) ಎಂದು ಅಧಿಕೃತವಾಗಿ ಹೆಸರಿಡಲಾಗಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮೈತ್ರಿಕೂಟ ರೂಪುಗೊಂಡಿದೆ.

ಚೆನ್ನೈನ ಪನೈಯೂರ್‌ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ಮೈತ್ರಿಕೂಟದ ನಾಯಕರ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲೇ ಮೈತ್ರಿಯ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಟಿವಿಕೆ, ಕಾಂಗ್ರೆಸ್‌, ಐಯುಎಂಎಲ್‌, ವಿಸಿಕೆ ಮತ್ತು ಎಂಡಿಎಂಕೆ ಪಕ್ಷಗಳು ಈ ಮೈತ್ರಿಕೂಟದಲ್ಲಿವೆ. ಚುನಾವಣೆ ಹಿನ್ನೆಲೆಯಲ್ಲಿ ಸೀಟು ಹಂಚಿಕೆ, ಜಂಟಿ ಪ್ರಚಾರ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಯಲಿದೆ.

ಸಭೆಯಲ್ಲಿ ಕಾಂಗ್ರೆಸ್‌ನ ಮಾಣಿಕ್ಕಂ ಟ್ಯಾಗೋರ್, ತಾರಾಗೈ ಕ್ಯಾಥ್‌ಬರ್ಟ್ ಮತ್ತು ಪ್ರವೀಣ್ ಚಕ್ರವರ್ತಿ, ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಳವನ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಎಂಡಿಎಂಕೆಯಿಂದ ವೈಕೋ ಹಾಗೂ ದುರೈ ವೈಕೋ, ಐಯುಎಂಎಲ್‌ನ ಕೆ.ಎಂ. ಖಾದರ್ ಮೊಹಿದ್ದೀನ್ ಮತ್ತು ಶಹಜಹಾನ್ ಕೂಡ ಸಭೆಯಲ್ಲಿ ಹಾಜರಿದ್ದರು.

ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಮೈತ್ರಿ ಚುನಾವಣಾ ಕಣಕ್ಕಿಳಿಯಲು ಸಿದ್ಧವಾಗುತ್ತಿದೆ. ಹೀಗಾಗಿ ವಿಜಯ್‌ ಅವರ ಟಿವಿಕೆ ಮುಂದಿನ ಚುನಾವಣೆಯಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ತಮಿಳುನಾಡು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಆದರೆ ಸಭೆಗೆ ಸಿಪಿಐಎಂ ಮತ್ತು ಸಿಪಿಐ ಪಕ್ಷಗಳ ಪ್ರತಿನಿಧಿಗಳು ಗೈರಾಗಿರುವುದು ಕೂಡ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಮೈತ್ರಿಗೆ ಇನ್ನಷ್ಟು ಪಕ್ಷಗಳು ಸೇರುತ್ತವೆಯೇ ಎಂಬುದೂ ಈಗ ಚರ್ಚೆಯ ವಿಷಯವಾಗಿದೆ.

Leave a Reply

Your email address will not be published. Required fields are marked *