Sanju Samson: ಬಡ ವಿದ್ಯಾರ್ಥಿಗಳ ನೆರವಿಗೆ ನಿಂತ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್

Sanju Samson: ಕ್ರಿಕೆಟ್ ಮೈದಾನದಲ್ಲಿ ಭಾರತಕ್ಕೆ ಹೆಮ್ಮೆ ತಂದಿರುವ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಐಎಎಸ್, ಐಪಿಎಸ್ ಆಗುವ ಕನಸು ಕೈಬಿಡುವ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗೆ ಅವರು ಮುಂದಾಗಿದ್ದಾರೆ.

ಸಂಜು ಸ್ಯಾಮ್ಸನ್ ಫೌಂಡೇಶನ್ ಹಾಗೂ ಲೀಡ್ ಐಎಎಸ್ ಅಕಾಡೆಮಿ ಜಂಟಿಯಾಗಿ 1,000 ವಿದ್ಯಾರ್ಥಿಗಳಿಗೆ ಉಚಿತ UPSC ಸಿವಿಲ್ ಸರ್ವಿಸಸ್ ಕೋಚಿಂಗ್ ನೀಡುವ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದೆ.

ಕೇವಲ ಕೋಚಿಂಗ್ ಮಾತ್ರವಲ್ಲ!
ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ UPSC ಪರೀಕ್ಷೆಯ ತರಬೇತಿ ಜೊತೆಗೆ ವೈಯಕ್ತಿಕ ಮಾರ್ಗದರ್ಶನವೂ ಸಿಗಲಿದೆ. ಉನ್ನತ ಅಧಿಕಾರಿಗಳು ಹಾಗೂ ತಜ್ಞರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.

UPSC ಸಂದರ್ಶನ ಎದುರಿಸಲು ಅಗತ್ಯವಿರುವ ಕಮ್ಯುನಿಕೇಷನ್ ಸ್ಕಿಲ್ಸ್, ನಾಯಕತ್ವ ಗುಣ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಜೊತೆಗೆ ಆಡಳಿತಾತ್ಮಕ ನಿರ್ಧಾರಗಳಿಗೆ ಅಗತ್ಯವಾದ ವಿವೇಚನಾ ಶಕ್ತಿ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನೂ ಬೆಳೆಸುವ ಉದ್ದೇಶ ಹೊಂದಿದೆ.

ಕೇರಳದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ
ದೇಶದಾದ್ಯಂತ ಇರುವ ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಆದರೆ ಸಂಜು ಸ್ಯಾಮ್ಸನ್ ಅವರ ತಾಯ್ನಾಡಾದ ಕೇರಳದ ವಿಳಿಂಜಂ ಮತ್ತು ಸುತ್ತಮುತ್ತಲಿನ ಕರಾವಳಿ ಪ್ರದೇಶಗಳ ಮೀನುಗಾರಿಕಾ ಸಮುದಾಯದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಫೌಂಡೇಶನ್ ತಿಳಿಸಿದೆ.

“ದೇಶ ಸೇವೆ ಮಾಡುವ ಹಂಬಲವಿರುವ ಯುವ ಪ್ರತಿಭೆಗಳಿಗೆ ಹಣಕಾಸಿನ ಸಮಸ್ಯೆ ಅಡ್ಡಿಯಾಗಬಾರದು. ಈ ವಿದ್ಯಾರ್ಥಿವೇತನವು ದೇಶದ ಭವಿಷ್ಯದ ಉತ್ತಮ ಆಡಳಿತಗಾರರನ್ನು ರೂಪಿಸಲು ಸಹಾಯ ಮಾಡುತ್ತದೆ” ಎಂಬುದು ಸಂಜು ಸ್ಯಾಮ್ಸನ್ ಅವರ ಆಶಯವಾಗಿದೆ.

ಕ್ರಿಕೆಟ್ ಮೂಲಕ ದೇಶಕ್ಕೆ ಕೀರ್ತಿ ತಂದಿರುವ ಸಂಜು ಸ್ಯಾಮ್ಸನ್, ಇದೀಗ ಶಿಕ್ಷಣದ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು ಗಮನ ಸೆಳೆದಿದೆ. ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಬೆಂಬಲ ನೀಡುವ ಈ ಪ್ರಯತ್ನಕ್ಕೆ ಸಾಮಾಜಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *