ಗಾಂಜಾ ಸೇವನೆ ಪಾಸಿಟಿವ್; ಫುಕೆಟ್-ದೆಹಲಿ ವಿಮಾನದ ಪೈಲಟ್ ವಜಾ

ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ ಮಾದಕ ವಸ್ತು ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ಬಸ್ A320 ವಿಮಾನ ಹಾರಾಟದ ವೇಳೆ ಸುಮಾರು 300 ಅಡಿ ಕೆಳಕ್ಕೆ ಇಳಿದಿತ್ತು. ವಿಮಾನದಲ್ಲಿದ್ದ 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಪೈಕಿ ಹಲವರಿಗೆ ಗಾಯಗಳಾಗಿದ್ದವು. ವಿಮಾನವನ್ನು ಬಳಿಕ ನಿಯಂತ್ರಣಕ್ಕೆ ತಂದು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿತ್ತು. ಸಿಬ್ಬಂದಿಯೊಬ್ಬರಿಗೆ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ತನಿಖೆ ನಡೆಸುತ್ತಿದೆ. ಪ್ರಾಥಮಿಕ ವರದಿ ಪ್ರಕಾರ, ವಿಮಾನದ ಮೂರೂ ಹೈಡ್ರಾಲಿಕ್ ಸಿಸ್ಟಮ್‌ಗಳಲ್ಲಿ ಒತ್ತಡ ಕಡಿಮೆಯಾಗಿದ್ದರಿಂದ ಆಟೋಪೈಲಟ್ ಸಂಪರ್ಕ ಕಡಿತಗೊಂಡಿತ್ತು. ಕೆಲವು ಸೆಕೆಂಡುಗಳ ಕಾಲ ಫ್ಲೈಟ್ ಕಂಟ್ರೋಲ್ ಪ್ರತಿಕ್ರಿಯಿಸಿರಲಿಲ್ಲ ಎಂದು ವರದಿಯಾಗಿದೆ. ತಾಂತ್ರಿಕ ದೋಷದ ಕುರಿತು ತನಿಖೆ ಮುಂದುವರಿದಿದೆ.

ಪೈಲಟ್‌ಗೆ ಡ್ರಗ್ಸ್ ಟೆಸ್ಟ್

ಘಟನೆಯ ಬಳಿಕ ವಿಮಾನದಲ್ಲಿದ್ದ ಪೈಲಟ್‌ಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಹ-ಪೈಲಟ್‌ರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರೆ, ಮುಖ್ಯ ಪೈಲಟ್‌ರ ಆರಂಭಿಕ ಪರೀಕ್ಷೆ ಹಾಗೂ ನಂತರದ ರಕ್ತ ಪರೀಕ್ಷೆಯಲ್ಲಿ ಸೈಕೋಆಕ್ಟಿವ್ ವಸ್ತು ಬಳಕೆಯ ಅಂಶ ಪತ್ತೆಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಏರ್ ಇಂಡಿಯಾ ವಕ್ತಾರರ ಪ್ರಕಾರ, ವಿಮಾನ ಸುರಕ್ಷತೆಗೆ ಸಂಸ್ಥೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತದೆ. ಸುರಕ್ಷತೆ, ದೈಹಿಕ ಸಾಮರ್ಥ್ಯ ಮತ್ತು ನಿಯಂತ್ರಕ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಂಸ್ಥೆ ‘ಝೀರೋ ಟಾಲರೆನ್ಸ್’ ನೀತಿ ಅನುಸರಿಸುತ್ತಿದ್ದು, ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಪೈಲಟ್‌ನನ್ನು ತಕ್ಷಣದಿಂದಲೇ ಉದ್ಯೋಗದಿಂದ ವಜಾಗೊಳಿಸಲಾಗಿದೆ.

Leave a Reply

Your email address will not be published. Required fields are marked *