ದರ್ಶನ್‌ಗೆ ಮತ್ತಷ್ಟು ಸಂಕಷ್ಟ; ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರ್ಟ್‌ ಅಸ್ತು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್‌ ಮಾಫಿ ಸಾಕ್ಷಿ (Approver) ಆಗಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ.

ಸಿಸಿಹೆಚ್‌ 42ರ ನ್ಯಾಯಾಲಯ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಅನುಮತಿ ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಎಲ್ಲಾ ಸತ್ಯಗಳನ್ನು ನ್ಯಾಯಾಲಯದ ಮುಂದೆ ಹೇಳಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ಪ್ರದೋಷ್‌ ಸುಳ್ಳು ಹೇಳಿಕೆ ನೀಡಿದರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟರೆ, ಮತ್ತೆ ಅವರನ್ನು ಆರೋಪಿಯಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ಕೋರ್ಟ್‌ ಎಚ್ಚರಿಸಿದೆ.

ಪ್ರದೋಷ್‌ ಈಗ ಪ್ರಕರಣದ ಪ್ರಮುಖ ಸಾಕ್ಷಿಯಾಗಲಿದ್ದು, ದರ್ಶನ್‌ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ತಮ್ಮ ಬಳಿ ಇರುವ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹೇಳಬೇಕಾಗಿದೆ. ಇದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಕೋರ್ಟ್‌ ಸೂಚನೆಯಂತೆ ಟ್ರಯಲ್ ಮುಗಿಯುವವರೆಗೂ ಪ್ರದೋಷ್‌ ಜೈಲಿನಲ್ಲೇ ಇರಬೇಕು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಗೊತ್ತಿರುವ ಮಾಹಿತಿಯನ್ನು ಸಂಪೂರ್ಣವಾಗಿ ಮತ್ತು ಸತ್ಯವಾಗಿ ತಿಳಿಸಬೇಕು.

ಪ್ರದೋಷ್‌ ಮಾಫಿ ಸಾಕ್ಷಿಯಾಗಿರುವುದು ಪ್ರಕರಣದ ಉಳಿದ ಆರೋಪಿಗಳಿಗೆ ಕಾನೂನು ಹೋರಾಟದಲ್ಲಿ ಮತ್ತಷ್ಟು ಸವಾಲು ತಂದೊಡ್ಡುವ ಸಾಧ್ಯತೆಯಿದೆ. ಅವರ ಹೇಳಿಕೆಗಳು ಮುಂದಿನ ವಿಚಾರಣೆಯಲ್ಲಿ ಪ್ರಮುಖವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *