ದೇಶದಲ್ಲಿ ಸಕ್ಕರೆ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸದ್ಯ ಸಕ್ಕರೆ ಬೆಲೆ ಕೆಜಿಗೆ ಸುಮಾರು ₹10ರಷ್ಟು ಹೆಚ್ಚಾಗಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಬೆಲೆ ಇನ್ನೂ ಶೇ.20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಇದರ ನಡುವೆ ಸಕ್ಕರೆ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದೆ.
E20ಗೂ ಸಕ್ಕರೆ ಬೆಲೆಗೂ ಸಂಬಂಧವಿಲ್ಲ ಎಂದ ಕೇಂದ್ರ
ಪೆಟ್ರೋಲ್ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ E20 ಪೆಟ್ರೋಲ್ ಬಳಕೆಯನ್ನು ಉತ್ತೇಜಿಸುತ್ತಿದೆ. ಇದರಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ.
ಎಥೆನಾಲ್‌ನ್ನು ಮುಖ್ಯವಾಗಿ ಕಬ್ಬಿನಿಂದ ಉತ್ಪಾದಿಸಲಾಗುತ್ತದೆ. ಹೀಗಾಗಿ ಎಥೆನಾಲ್ ಉತ್ಪಾದನೆಗೆ ಹೆಚ್ಚು ಕಬ್ಬು ಬಳಕೆಯಾಗುತ್ತಿರುವುದರಿಂದ ಸಕ್ಕರೆ ಉತ್ಪಾದನೆ ಕಡಿಮೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಆದರೆ ಕೇಂದ್ರ ಸರ್ಕಾರದ ಪ್ರಕಾರ, ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರಣವಲ್ಲ. ದೇಶೀಯ ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವುದು, ಬೇಡಿಕೆ ಹೆಚ್ಚಾಗಿರುವುದು ಮತ್ತು ಮಾರುಕಟ್ಟೆಯಲ್ಲಿನ ಸಕ್ಕರೆ ಸಂಗ್ರಹದಂತಹ ಕಾರಣಗಳಿಂದ ಬೆಲೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.
ಸುಮಾರು 10 ವರ್ಷಗಳ ಬಳಿಕ ಸಕ್ಕರೆ ಆಮದು
ದೇಶೀಯ ಮಾರುಕಟ್ಟೆಯಲ್ಲಿನ ಕೊರತೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಇದೀಗ ಸಕ್ಕರೆ ಆಮದಿಗೂ ಅವಕಾಶ ನೀಡಿದೆ. ಸುಮಾರು 10 ವರ್ಷಗಳ ಬಳಿಕ ಸಕ್ಕರೆ ಆಮತಿಗೆ ಅನುಮತಿ ನೀಡಲಾಗಿದ್ದು, ಸುಮಾರು 10 ಲಕ್ಷ ಟನ್ ಸಕ್ಕರೆಯನ್ನು ಕಸ್ಟಮ್ಸ್ ಸುಂಕವಿಲ್ಲದೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಿ ಬೆಲೆ ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ.
ಖರ್ಗೆ ಪ್ರಶ್ನೆ ಏನು?
ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ವಿಶ್ವದ ಪ್ರಮುಖ ಸಕ್ಕರೆ ಉತ್ಪಾದಕ ಮತ್ತು ರಫ್ತು ರಾಷ್ಟ್ರವಾಗಿರುವ ಭಾರತ ಇದೀಗ ಸುಂಕವಿಲ್ಲದೆ ಸಕ್ಕರೆ ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಲ್ಲದೆ, ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ನೀತಿಯೂ ಕಾರಣವಾಗುತ್ತಿದ್ದರೆ E20 ನೀತಿಯನ್ನು ಮರುಪರಿಶೀಲಿಸಬಾರದೇ? ಎಂದು ಪ್ರಶ್ನಿಸಿದ್ದಾರೆ.
ಹೀಗಾಗಿ ಸದ್ಯ ದೇಶದಲ್ಲಿ ಒಂದು ಕಡೆ ಸಕ್ಕರೆ ಬೆಲೆ ಏರಿಕೆ ಗ್ರಾಹಕರಿಗೆ ತಲೆನೋವಾಗಿದ್ದರೆ, ಮತ್ತೊಂದೆಡೆ E20 ಎಥೆನಾಲ್ ನೀತಿ ಮತ್ತು ಸಕ್ಕರೆ ಬೆಲೆ ನಡುವಿನ ಸಂಬಂಧದ ಬಗ್ಗೆ ರಾಜಕೀಯ ಚರ್ಚೆ ಕೂಡ ಜೋರಾಗಿದೆ.