ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಬ್ಲೂ ಲೈನ್‌ ಆರಂಭ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಯ ಬೆನ್ನಲ್ಲೇ ಇದೀಗ ಬ್ಲೂ ಲೈನ್ ಮಾರ್ಗದಲ್ಲೂ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಬೆಂಗಳೂರಿನ ಐಟಿ ಕಾರಿಡಾರ್‌ನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿರುವ ಈ ಮಾರ್ಗದಲ್ಲಿ ನವೆಂಬರ್ 10ರಿಂದ ಪರೀಕ್ಷಾರ್ಥ ರೈಲು ಸಂಚಾರ ನಡೆಯುತ್ತಿದೆ.

ಬೈಯಪ್ಪನಹಳ್ಳಿ ಡಿಪೋದಿಂದ ಕೆ.ಆರ್. ಪುರಂ ಮಾರ್ಗವಾಗಿ ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣದವರೆಗೆ ಸುಮಾರು 6 ಕಿ.ಮೀ. ದೂರ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿದೆ. ಸದ್ಯ ಮೊದಲ ನಾಲ್ಕು ನಿಲ್ದಾಣಗಳ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಮಾರತ್ತಹಳ್ಳಿಯವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಯೋಜಿಸಿದೆ.

ಟ್ರಯಲ್ ರನ್ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ

ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪರೀಕ್ಷಾರ್ಥ ಸಂಚಾರದ ಪ್ರಗತಿಯನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಈ ಮಾರ್ಗದಲ್ಲಿ ಸುಮಾರು 11ರಿಂದ 12 ಲಕ್ಷ ಜನರು ಉದ್ಯೋಗಕ್ಕಾಗಿ ಸಂಚರಿಸುತ್ತಾರೆ. ಹೀಗಾಗಿ ಮೆಟ್ರೋ ಸಂಪರ್ಕವು ಉದ್ಯೋಗಿಗಳು ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದರು.

ಮುಂದಿನ ತಿಂಗಳು ಇನ್ನೂ ನಾಲ್ಕು ನಿಲ್ದಾಣಗಳವರೆಗೆ ಟ್ರಯಲ್ ರನ್ ವಿಸ್ತರಿಸುವ ಯೋಜನೆಯಿದೆ. ಜನವರಿ ವೇಳೆಗೆ ಸಿಗ್ನಲಿಂಗ್ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅಗತ್ಯ ಪರೀಕ್ಷೆ ಮತ್ತು ಸುರಕ್ಷತಾ ಪರಿಶೀಲನೆಗಳ ನಂತರ ಮುಂದಿನ ವರ್ಷದ ಮಧ್ಯಭಾಗದಲ್ಲಿ ಹಂತ 2ಎ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಬ್ಲೂ ಲೈನ್ ಮೆಟ್ರೋ ಮಾರ್ಗ ಎಷ್ಟು ಉದ್ದವಿದೆ?

ಬೆಂಗಳೂರು ದಕ್ಷಿಣ ಭಾಗದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬ್ಲೂ ಲೈನ್ ಒಟ್ಟು 58.19 ಕಿ.ಮೀ. ಉದ್ದವಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ.

ಹಂತ 2ಎ: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗೆ ಸುಮಾರು 19.75 ಕಿ.ಮೀ. ಉದ್ದದ ಮಾರ್ಗವಿದೆ. ಈ ಮಾರ್ಗವು ಬೆಳ್ಳಂದೂರು, ಮಾರತ್ತಹಳ್ಳಿ, ದೊಡ್ಡನೆಕ್ಕುಂದಿ ಸೇರಿದಂತೆ ಔಟರ್ ರಿಂಗ್ ರೋಡ್‌ನ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. ಈ ಭಾಗದಲ್ಲಿ ಒಟ್ಟು 13 ನಿಲ್ದಾಣಗಳಿವೆ.

ಹಂತ 2ಬಿ: ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸುಮಾರು 38.44 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗವು ಹೆಬ್ಬಾಳ ಸೇರಿದಂತೆ ಪ್ರಮುಖ ಪ್ರದೇಶಗಳ ಮೂಲಕ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿದೆ.

ಯಾವಾಗ ಸಾರ್ವಜನಿಕ ಸಂಚಾರಕ್ಕೆ ಮುಕ್ತ?

ಸದ್ಯ ಬ್ಲೂ ಲೈನ್‌ನಲ್ಲಿ ಟ್ರಯಲ್ ರನ್ ನಡೆಯುತ್ತಿದ್ದು, ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಅಗತ್ಯ ಪರೀಕ್ಷೆಗಳು ಮತ್ತು ಸುರಕ್ಷತಾ ಪ್ರಮಾಣೀಕರಣ ಪೂರ್ಣಗೊಂಡ ಬಳಿಕವೇ ಸಾರ್ವಜನಿಕರಿಗೆ ಮೆಟ್ರೋ ಸೇವೆ ಆರಂಭವಾಗಲಿದೆ.

ಹಂತ 2ಎ ಮಾರ್ಗವನ್ನು 2027ರ ಮಧ್ಯಭಾಗದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇನ್ನು ಹಂತ 2ಬಿ ಕಾಮಗಾರಿಯನ್ನೂ ವೇಗಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬ್ಲೂ ಲೈನ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದರೆ, ಬೆಂಗಳೂರಿನ ಐಟಿ ಉದ್ಯೋಗಿಗಳು, ವಿಮಾನ ನಿಲ್ದಾಣಕ್ಕೆ ತೆರಳುವವರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *